Tuesday, February 19, 2013

ಕೊನೆಯ ಪ್ರಯತ್ನ

ಯಾವ ದಾರಿ ಹಿಡಿಯಲಿ? ನೇರ ಹೋದರೆ ಅದು ಒಳ್ಳೇ ದಾರಿ; ಇಲ್ಲೇ ಎಡಕ್ಕೆ ತಿರುಗಿ ಹೋದರೆ, ದಾರಿ ಏನೋ ಇಕ್ಕಟ್ಟೆ ಆದರೆ ನೇರ.

ಅವನು ಹೆಚ್ಚು ಯೋಚನೆಗೆ ನಿಲ್ಲಲಿಲ್ಲ. ಸದ್ದಾಗದಂತೆ ಗೇಟು ತೆರೆದು ಎಡಕ್ಕೆ ತಿರುಗಿ ನಡೆಯಲು ತೊಡಗಿದ.

ರಾತ್ರಿಯಿಡೀ ನೋವಿನಿಂದ ನರಳಿ, ಆತ ಒಂದು ನಿರ್ಧಾರಕ್ಕೆ ಬರುವ ಹೊತ್ತಿಗೆ ಗಂಟೆ ಮೂರು ಬಡಿದಿತ್ತು. ತುಂಬಾ ವರುಷಗಳಿಂದ ಕಾಡುತ್ತಿದ್ದ ಆ ನೋವು ರಾತ್ರಿಯಲ್ಲಿ ಸರಿಯಾಗಿ ನಿದ್ದೆ ಮಾಡುವ ಅವಕಾಶವನ್ನು  ಎಂದೋ ತೆಗೆದು ಹಾಕಿತ್ತು. ಆ ನರಳಿದ ದಿನಗಳಲ್ಲಿ ಮನಸ್ಸು ನಿಧಾನವಾಗಿ ಒಂದು ಆಲೋಚನೆಯನ್ನು ಹುಟ್ಟಿಸಿ ಅದಕ್ಕೆ ಒಂದು ಸಂಪೂರ್ಣ ಆಕಾರ ಕೊಡಲು ಇಷ್ಟು ಸಮಯ ತೆಗೆದುಕೊಂಡಿತ್ತು.

ಆ ಅವೇಳೆಯಲ್ಲಿ ಯಾರೂ ಎಚ್ಚರವಿರುವ ಸಾಧ್ಯತೆ ಇರುವುದಿಲ್ಲ ಎನ್ನುವ ಧೈರ್ಯದಲ್ಲಿ ಹೆಜ್ಜೆ ಹಾಕಿದ. ನೂರು ಮೀಟರು ನಡೆದ ಮೇಲೆ ಆ ಕಾಲನಿಯ ಬೌಂಡ್ರಿ ಗೋಡೆ ಅವನನ್ನು ತಡೆಯಿತು. ಆ ಗೋಡೆಯಲ್ಲೊಂದು ಒಡಕವಿದ್ದು, ಆ ಸಂದಿ ಮೂಲಕ ಕಾಲನಿಯ ಮಕ್ಕಳು ಹೊರಗೋಡುವುದನ್ನು ಕಂಡಿದ್ದ. ಎಡಕ್ಕೆ ಕಣ್ಣು ಹಾಯಿಸಿದಾಗ ಪೊದೆ ಮುಚ್ಚಿದ ಆ ದಾರಿಯಲ್ಲಿ, ಗೋಡೆಯಾಚೆಯಿದ್ದ ಮನೆಯ ಪಡಸಾಲೆಯ ಬಲ್ಬಿನ ನಿಮ್ನ ಬೆಳಕು ಒಳ ಹರಿದಿರುವುದನ್ನು ಕಂಡ. ಕೈಯಿಂದ ಗೆಲ್ಲುಗಳನ್ನು ಸರಿಸಿ, ತನ್ನ ಸ್ಥೂಲ ದೇಹವನ್ನು ಕಷ್ಟದಿಂದ ಆ ಎಡೆಯೊಳಗೆ ತೂರಿಸಿ ಕಾಲನಿಯಿಂದ ಹೊರ ಬಂದ.

ಅವನು ಕಾಗದವನ್ನು ಒಂದು ದಿನ ಮೊದಲೇ ಬರೆದು ರೆಡಿ ಮಾಡಿ ಇಟ್ಟುಕೊಂಡಿದ್ದ. ಮನೆಯಲ್ಲಿ ಬರೆಯುವ ಪ್ರಶ್ನೆಯೇ ಇರಲಿಲ್ಲ. ಪ್ರೈವೆಸಿ ಏನಿದ್ದರು ಆಫೀಸಲ್ಲೇ.

ಬದುಕಿನಲ್ಲಿ ಜಿಗುಪ್ಸೆ ಬಂದಿದೆ.

"ಜಿಗುಪ್ಸೆ" ಅವನ ಫೇವರಿಟ್ ಪದ.

ಅದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗುತ್ತಿದ್ದೇನೆ.

"ಆತ್ಮಹತ್ಯೆ" ತೀರಾ ನಾಟಕೀಯ ಅನಿಸಿತು. ಹೊಸ ಕಾಗದ.

ಬದುಕಿನಲ್ಲಿ ಜಿಗುಪ್ಸೆ ಬಂದಿದೆ. ಅದಕ್ಕಾಗಿ ಸಾಯಲಿಕ್ಕೆ ಹೋಗುತ್ತಿದ್ದೇನೆ.

"ಸಾವು" ತುಂಬಾ ಡೈರೆಕ್ಟ್ ಅನಿಸಿತು. ಹೊಸ ಕಾಗದ.

ಬದುಕಿನಲ್ಲಿ ಜಿಗುಪ್ಸೆ ಬಂದಿದೆ. ಅದಕ್ಕಾಗಿ ಜೀವ ತೆಗೆದುಕೊಳ್ಳಲು ಹೋಗುತ್ತಿದ್ದೇನೆ. ನಾನು ಸಹಾಯಕ್ಕಾಗಿ ಎಷ್ಟೊಂದು ಬಾರಿ ಸೂಚನೆ ಕೊಟ್ಟಿದ್ದೆ. ಆದರೆ ಯಾರೂ ಅದಕ್ಕೆ ಗಮನ ಕೊಡಲಿಲ್ಲ.

ತನಗೆ ಹತ್ತಿರದವರ ಬಾಳು  ಈ ದೂಶಣೆಯಿಂದ ಕಷ್ಟಕ್ಕೀಡಾಗುವುದೆಂದು ಅನಿಸಿತು. ಹೊಸ ಕಾಗದ.

ಬದುಕಿನಲ್ಲಿ ಜಿಗುಪ್ಸೆ ಬಂದಿದೆ. ಅದಕ್ಕಾಗಿ ಜೀವ ತೆಗೆದುಕೊಳ್ಳಲು ಹೋಗುತ್ತಿದ್ದೇನೆ.ನನ್ನ ಸಾವಿಗೆ ಯಾರೂ ಕಾರಣರಲ್ಲ.

ಅದಕ್ಕಿಂತಲೂ ಮುಂದೆ ಬರೆಯಲು ಅವನಿಗೇನು ತೋಚಲಿಲ್ಲ.

ಹೊಳೆ ಇನ್ನು ಇನ್ನೂರು ಮೀಟರು ದೂರದಲ್ಲಿದೆ. ಇದನ್ನು ಸಾಧಿಸಿದರೆ, ನೋವು, ಹತಾಶೆಗಳಿಗೆ  ಸಂಪೂರ್ಣ ವಿರಾಮ.

ಕಾಲುಗಳು ಇನ್ನು ಚುರುಕಾದವು.

ಬಹುಶ ಕ್ಷಿಪ್ರ ದಾರಿ ಯೋಚಿಸಬೇಕಾಗಿತ್ತು. ಇನ್ನು ನೂರು ಮೀಟರು ಮಾತ್ರ. ಇನ್ನೇನು ತಲುಪಿತು.

ನಿಧಾನವಾಗಿ ನೀರೊಳಗೆ ನಡೆಯ ತೊಡಗಿದ. ಆ ಬೇಸಿಗೆಯ ದಿನದಂದು ನೀರಿನ ಅತಿ ಆಳ ಆತನ ಸೊಂಟಕ್ಕಷ್ಟೇ ಬಂದಿತು.

ಸಾಯಲು ಹೊರಟಾಗಲೂ ಪರಿಹಾಸ. ಹತಾಶೆಯಿಂದ ಪರಿತಪಿಸುವ ಸಮಯ ಕಳೆದು ಹೋಯಿತು. ಇನ್ನೇನಿದ್ದರೂ ಕೊನೆಯ ಪ್ರಯತ್ನ, ಆಮೇಲೆ ಶಾಂತ ನಿದ್ರೆ.

ಪ್ರತಿ ಸರ್ತಿ ಕೊನೆಯ ಪ್ರಯತ್ನದ ವಿಚಾರ ಬಂದಾಗ ಏನೋ ಒಂದು ರೋಮಾಂಚನ ಏನೋ ಒಂದು ಪ್ರಶಾಂತತೆ ಏನೋ ಒಂದು ಹೊಸ ಜೀವನದ ಹುರುಪು ಇಳಿದು ಬರುತಿತ್ತು.

ಇನ್ನೊಂದು ಅರ್ಧ ಕಿಲೋಮೀಟರು ನದಿಯ ಉದ್ದಕ್ಕೆ ಮುಂದೆ ಹೋದರೆ ಮುಳುಗುವಷ್ಟು ಆಳ ಸಿಗುತ್ತದೆ.

ನೇರವಾಗಿ ಹೊಳೆಯಲ್ಲೇ ನಡೆದುಕೊಂಡು ಹೋದರೆ ವೇಗವಾಗಿ ಹೋಗಲಾಗುವುದಿಲ್ಲ ಎಂದು ಮತ್ತೆ ದಡಕ್ಕೆ ಬಂದು ದಾಪುಗಾಲಿಟ್ಟು ನಡೆಯಲಾರಂಭಿಸಿದ.

ಕೊನೆಯ ಪ್ರಯತ್ನ;ಕೊನೆಯ ಪ್ರಯತ್ನ;ಕೊನೆಯ ಪ್ರಯತ್ನ;

ಇನ್ನೂ ನಾಲ್ನೂರು ಮೀಟರು. ಮನೆಯಲ್ಲೇ ಏನಾದರು ಮಾಡಬೇಕಾಗಿತ್ತು.

ಆದರೆ ಮಕ್ಕಳು ತನ್ನ ಮೃತ ದೇಹವನ್ನು ನೋಡುವುದು ತೀರ ಕ್ರೂರತನ ಅನಿಸಿತು.

ಆಳದ ಹೊಳೆ  ಇನ್ನೂ ದೂರದಲ್ಲಿದೆ.

ಧುತ್ತನೆ ಪ್ರಯತ್ನ ಕೈಬಿಡುವ ಆಲೋಚನೆ ಬಂದಿತು. ಆಲೋಚನೆ ನಿರ್ಧಾರದ ರೂಪದಲ್ಲಿ ಬರಲಿಲ್ಲ. ಬದಲು ಏನೋ ಒಂದು ಸೋಮಾರಿತನದ ಕಡಿವಾಣದಂತೆ ಬಂದು ಅವನನ್ನು ತಡೆಯಿತು.

ನೋವು ಇದ್ದದ್ದೆ. ಇಷ್ಟು ವರುಷ ಬದುಕಿದ್ದಂತೆ ಇನ್ನು ಕೆಲವು ವರುಷ.

ಅಲ್ಲೇ ದಡದ ಮೇಲೆ ಒಂದೆರಡು ಗಂಟೆ ಸುಮ್ಮನೆ ಕುಳಿತುಕೊಂಡ. ಮನಸ್ಸಿನಲ್ಲಿ ಯಾವ ವಿಚಾರಗಳೂ ಬರಲಿಲ್ಲ. ಅಥವಾ ತುಂಬಾ ವಿಚಾರಗಳು ಬಂದು ಬೆಮೆಗೊಂಡ. ಎದ್ದು ನಿಧಾನವಾಗಿ ಮನೆಗೆ ತಿರುಗಿ ಹೊರಟ.

ಬಹುಷ ಕಾಗದ ಯಾರೂ ನೋಡಿರಲಿಕ್ಕಿಲ್ಲ. ನೋಡಿದರೂ ತುಂಬಾ ಪ್ರಶ್ನೆ ಕೇಳಲಿಕ್ಕಿಲ್ಲ. 

1 comment: