Showing posts with label Kannada Translation. Show all posts
Showing posts with label Kannada Translation. Show all posts

Sunday, August 4, 2013

ಒಂಟಿತಾನುವಾದಿಯ ಸ್ವಗತ

(Soliloquy of The Solipsist By Syliva Plath

ನಾನು?
ನಾನು  ಒಂಟಿಯಾಗಿ ನಡೆಯಲೆ;
ನಟ್ಟಿರುಳಿನ ಆ ದಾರಿ
ಉರುಳಿಕೊಳ್ಳುವುದು ನನ್ನ ಕಾಲಡಿಯಿಂದ ತೂರಿ;
ಮುಚ್ಚುವಾಗ ನನ್ನ ಕಂಗಳು
ಮರೆಯಾಗುವವು ಕನಸು ಕಾಣುವ ಇವೆಲ್ಲ ಮನೆಗಳು;
ನನ್ನೊಂದು ಸ್ವೈರತೆಯ ತೋಲೆ
ತಿಂಗಳನ ಸುರಕಾಯ ಮಾಡುಗಳ ಮೇಲೆ
ಊರ್ಧ್ವವಾಗಿ ನೇಲುವುದು

ನಾನು
ಮನೆಗಳನು ಮುರುಂಟಿಸುವೆನಲ್ಲಿ
ಮರಗಳು ಕುಬ್ಜವಾಗುವುವು
ದೂರಕೆ ಸರಿಯುತ; ನನ್ನ ದಿಟ್ಟಿಯ ನೊಗವು
ಓಲಾಡಿಸುವುದು ಗೊಂಬೆ-ಮಂದಿಯೆ
ಅವು,  ತಾವು ಕರಗುವ ಅರಿವಿಲ್ಲದೆಯೆ
ನಗುತ್ತವೆ, ಚುಂಬಿಸುತ್ತವೆ, ತೇಲುತ್ತವೆ ಅಮಲಿನಲ್ಲಿ
ಊಹಿಸದೆ ನಾನು ಮಿಟುಕಲು ಬಯಸಿದಲ್ಲಿ
ಸತ್ತು ಹೋಗುತ್ತವೆ ಎಂದು

ನಾನು
ಒಳ್ಳೇ ಖುಷಿಯಲ್ಲಿ ಇರುವಾಗ
ಹುಲ್ಲಿಗೆ ಹಸಿರ ಹಚ್ಚುವೆನು
ಬಾನಿಗೆ ನೀಲ ಕಾಣಿಸುವೆನು, ಮತ್ತು ರವಿಗೆ ಹಾಕುವೆನು
ಹೊನ್ನು
ಏನಿದ್ದರೂ, ನನ್ನ ಶೀತಲ ಲಹರಿಯಲ್ಲಿ, ನಾನು ಹಾಡುವೆನು
ದಬ್ಬಾಳಿಕೆಯ ರಾಗ
ಬಹಿಷ್ಕರಿಸಲು ಯಾವುದೇ ಬಣ್ಣವ ಮತ್ತು ನಿಷೇದಿಸಲು ಯಾವುದೇ ಹೂವಾಗ
ಮಲರುವುದ

ನಾನು
ತಿಳಿದಿದ್ದೇನೆ ನೀನು ತೋರುವೆ
ಮಿಂಚುತ ನನ್ನ ಬಳಿಯಲ್ಲಿ,
ಒಪ್ಪಿಕೊಳ್ಳದೆ ಎಂದೂ ನಿನ್ನ ಉದ್ಭವವಾದದ್ದು ನನ್ನ ಮನಸ್ಸಿನಲ್ಲಿ
ವಾದಿಸುವೆ ಭಾವಿಸುತ ನಿನ್ನ
ಅರುಮೆಯ ಉರಿಯೇ ಸಾಕು  ಋಜು ಪಡಿಸಲು ಈ ಅಸ್ಥಿತ್ವವನ್ನ
ಅಂತಿದ್ದರು ಇದು ನಿಜವೆ
ನಿನ್ನೆಲ್ಲ ಅಂದ, ನಿನ್ನೆಲ್ಲ ಜಾಣ್ಯ,  ಉಡುಗೊರೆಯದು, ನನ್ನ ಪ್ರಾಣವೆ,  
ನನ್ನಿಂದ

ತಂದೆಗಳಿಕೆಯ ಹೊಗಳಿಕೆ (In Praise of Self-Deprecation )

ಗಿಡುಗ ತನ್ನ ತಪ್ಪಾಯಿತೆಂದು ಹೇಳಬೇಕಾಗಿಲ್ಲ
ಸರಿ ತಪ್ಪುಗಳ ಶಂಕೆ ಚಿರತೆಗೆ ಸಲ್ಲ
ಪಿರಾನ್ಯಗಳು ತಮ್ಮ ಕೆಯ್ಕೆಗಳ ನೆಟ್ಟಗೆಯನ್ನು ನಚ್ಚುವುದಿಲ್ಲ
ಕಂದೋಡಿಗೆ ತನ್ನನ್ನೊಪ್ಪಿಕೊಳ್ಳಲು ಯಾವುದೇ ಮುಲಾಜಿಲ್ಲ

ಆತ್ಮ ವಿಮರ್ಶೆ ಮಾಡುವ ನರಿ ಇಲ್ಲಿಲ್ಲ
ಮಿಡತೆ, ಮೊಸಳೆ, ತ್ರಿಚಿನ, ತೊಣಚೆ
ಬಾಳುವುವು ತಮ್ಮಿಚ್ಚೆಯಂತೆ ಅದೂ ಹಿಗ್ಗಿನಲ್ಲಿ

ಗಾತುಕ ತಿಮಿಂಗಿಲದ ಗುಂಡಿಗೆಯ ತೂಕ ನೂರಾರು ಕಿಲೋಗಳು
ಆದರೆ ಅದು ಜೊಳ್ಳು ಉಳಿದೆಲ್ಲ ದಿಟ್ಟಿಗಳಲ್ಲಿ

ರವಿಯ ಈ ಮೂರನೆ ಗ್ರಹದೊಳು
ತುಮುಲವಿಲ್ಲದ ಒಣರ್ಪಿಗಿಂತ
ಮೃಗನೀಯವಾದದ್ದು ಬೇರಿಲ್ಲ